ಫುಲ್ಲರ್ ಮಣ್ಣು -
ಚೌಳು ಜೇಡು ಅಥವಾ ಚೌಳು ಮಣ್ಣು. ಇದರಲ್ಲಿ ಬಟ್ಟೆಗಳಿಗೆ ಅಂಟಿದ ಜಿಡ್ಡು ಮತ್ತು ಕೊಳೆಗಳನ್ನು ತೆಗೆಯುವ ಗುಣವಿದೆ ಈಗ ಇದು ಎಣ್ಣೆ ಮತ್ತು ಕೊಬ್ಬುಗಳ ಶುದ್ಧೀಕರಣದಲ್ಲಿ ಉಪಯೋಗಿಸಲ್ಪಡುತ್ತಿದೆ. ಶುಭ್ರೀಕರಿಸುವ ಜೇಡುಮಣ್ಣುಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಬಹುದು. ಪ್ರಾಕೃತಿಕವಾಗಿ ಕ್ರಿಯಾಶಕ್ತಿ ಇರುವವು ಮತ್ತು ಆಮ್ಲೀಯ ಪರಿಷ್ಕರಣದಿಂದ ಕ್ರಿಯಾಶಕ್ತಿ ವರ್ಧಿಸಿ ಉಪಯೋಗಿಸಬಹುದಾದವು. ಫುಲ್ಲರ್ ಮಣ್ಣು ಮೊದಲನೆಯ ಗುಂಪಿಗೂ ಬೆಂಟೊನೈಟ್ ಎರಡನೆಯ ಗುಂಪಿಗೂ ಸೇರಿದವು. ಫುಲ್ಲರ್ ಮಣ್ಣು ಹಸಿರುಮಿಶ್ರಿತ ಕಂದು ಇಲ್ಲವೆ ಹಳದಿ ಬಣ್ಣದ ಮೆದುವಾದ ಮಣ್ಣು. ಮುಟ್ಟುವುದಕ್ಕೆ ಬಹಳ ನಯವಾಗಿರುತ್ತದೆ. ಆದರೆ ಜಿಗುಟಿರುವುದಿಲ್ಲ. ಚಕ್ಕೆಚಕ್ಕೆಯಂತಿರುವ ಈ ಮಣ್ಣು ನಾಲಗೆಗೆ ಅಂಟಿಕೊಳ್ಳುವುದು. ಇದರಲ್ಲಿ ನೀರಿನ ಅಂಶ ಹೆಚ್ಚು. ನೀರಿನಿಂದ ತೋಯಿಸಿದಾಗ ಪುಡಿಪುಡಿಯಾಗುತ್ತದೆ. ಕಣಿಕದಂತೆ ಆಗುವುದಿಲ್ಲ.

	ಶೇಕಡಾ 70 ರಷ್ಟು ಫುಲ್ಲರ್ ಮಣ್ಣು ಕಲ್ಲೆಣ್ಣೆಯ ಶುದ್ಧೀಕರಣಕ್ಕೂ ಶೇಕಡಾ 10ರಷ್ಟು ಎಣ್ಣೆ ಮತ್ತು ಕೊಬ್ಬುಗಳ ಶುದ್ಧೀಕರಣಕ್ಕೂ ಉಪಯೋಗವಾಗುತ್ತಿದೆ. ಅವುಗಳ ಬಣ್ಣ ಮತ್ತು ವಾಸನೆಗಳನ್ನು ಇದು ಹೋಗಲಾಡಿಸುತ್ತದೆ. ನೀರನ್ನು ಶುದ್ಧೀಕರಿಸಲು ಸಹ ಇದನ್ನು ಬಳಸುತ್ತಾರೆ. ನೀರಿನ ಬಣ್ಣ ಮತ್ತು ವಾಸನೆಗಳನ್ನು ಇದು ಹೋಗಲಾಡಿಸುವುದಲ್ಲದೆ ಕೋಲಿಫಾರಮ್ ಬ್ಯಾಕ್ಟೀರಿಯಗಳಿಂದ ವಿಮುಕ್ತಿಗೊಳಿಸುತ್ತದೆ ಕೂಡ. ಮುದ್ರಣಕಾರ್ಯದಲ್ಲಿ ಘರ್ಷಕವಸ್ತುವಾಗಿ ಉಪಯೋಗ ಉಂಟು. ಆಹಾರ ಉತ್ಪನ್ನ ಮತ್ತು ಅಲಂಕಾರವಸ್ತುಗಳ ಬಣ್ಣ ಪತ್ತೆ ಹಚ್ಚುವ ಕಾರ್ಯಗಳಲ್ಲಿ ಕೂಡ ಉಪಯೋಗವಿದೆ.

	ಭಾರತ ವಿಭಜನೆಯಾಗುವುದಕ್ಕೆ ಮುಂಚೆ ಫುಲ್ಲರ್ ಮಣ್ಣು ಸಿಂಧ್ ಮತ್ತು ಖೈರಾಪುರ ಪ್ರದೇಶಗಳಲ್ಲಿಯೂ ಜೋಧ್‍ಪುರ್ ಮತ್ತು ಬಿಕನೀರ್ ಪ್ರದೇಶಗಳಲ್ಲಿಯೂ ಪ್ರಮುಖವಾಗಿ ದೊರೆಯುತ್ತಿತ್ತು. ಈಗ ಇದರ ಪ್ರಮಾಣ ಪಾಕಿಸ್ತಾನ ಮತ್ತು ಭಾರತಗಳಿಗೆ ಸರಿಸಮವಾಗಿ ಹಂಚಿಹೋಗಿದೆ. ಜೈಸಾಲ್ಮಿರ್, ಮಧ್ಯಪ್ರದೇಶ, ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಮುಂತಾದ ಕಡೆಗಳಲ್ಲಿ ಇದು ಅಲ್ಪ ಮೊತ್ತದಲ್ಲಿ ದೊರೆಯುತ್ತದೆ. ರಾಜಸ್ಥಾನದಲ್ಲಿ ಈ ಮಣ್ಣನ್ನು ಇಯೊಸೀನ್ ಕಾಲದ ಶಿಲೆಗಳಿಂದ ಹೊರತೆಗೆಯಲಾಗುತ್ತಿದೆ. ಬಿಕನೀರಿನ ಕೊಲೈತ್ ಬಳಿಯ ಮಾರ್, ಜೋಧ್‍ಪುರದ ಕಪೂರಿ ಎಂಬಲ್ಲಿ ಇದರ ಗಣಿಗಳಿವೆ. ಮಧ್ಯಪ್ರದೇಶದ ಫುಲ್ಲರ್ ಮಣ್ಣು ಕೆಳವಿಂಧ್ಯನ್ ಸ್ತೋಮಕ್ಕೆ ಸೇರಿದುದು. ಚಿಂಚೋಳಿಯಲ್ಲಿರುವ ಈ ವiಣ್ಣನ್ನು ಮೊದಲು ಬಟ್ಟೆಗಳನ್ನು ಶುಭ್ರೀಕರಿಸಲು ಉಪಯೋಗಿಸಲಾಗುತ್ತಿತ್ತು. ಈಗ ಇದನ್ನು ಸಾಬೂನು ತಯಾರಿಕೆ ಮತ್ತು ವನಸ್ಪತಿ ಶುದ್ಧೀಕರಣಕ್ಕೆ ಉಪಯೋಗಿಸಲಾಗುತ್ತಿದೆ.

	ಆದರ್ಶ ಚೌಳುಜೇಡು ಕರ್ನಾಟಕದ ಇನ್ನಾವ ಕಡೆಗಳಲ್ಲಿಯೂ ದೊರೆತಿಲ್ಲ. ಆದರೆ ಮಂಡ್ಯದ ಸುತ್ತಮುತ್ತ ಮತ್ತು ಸಿರಾ ತಾಲ್ಲೂಕಿನ ದ್ವಾರನಕುಂಟೆಯ ಬಳಿ ಇರುವ ನೇಜಿಂತೆ ಮತ್ತು ತಡಕಲೂರು ಎಂಬಲ್ಲಿ ದೊರೆಯುವ ಚೌಳನ್ನು ಮತ್ತು ಚೌಳುಮಣ್ಣನ್ನು ಚೌಳುಜೇಡು ಎಂದು ವಿಭಾಗ ಮಾಡುವುದು ರೂಢಿಯಲ್ಲಿದೆ. ಹರಳುಗಟ್ಟಿದ, ನಿಕ್ಷೇಪಗಳು ನೆಲಮಟ್ಟದಲ್ಲಿ ತೆಳುವಾದ ಪದರಗಳಲ್ಲಿ ಹರಡಿರುತ್ತವೆ. ಇವು ತಳದಲ್ಲಿರುವ ಗ್ರ್ಯಾನೈಟ್ ಮತ್ತು ನೈಸ್ ಶಿಲೆಗಳ ಸೋಡಾ ಫೆಲ್ಡ್‍ಸ್ಪಾರಿನ ಮೇಲೆ ಹೈಡ್ರೊಕ್ಲೋರಿಕ್ ಮತ್ತು ಕಾರ್ಬಾನಿಕ್ ಆಮ್ಲಗಳಿಂದ ಕೂಡಿದ ಅಂತರ್ಜಲದ ರಾಸಾಯನಿಕ ಕ್ರಿಯೆಯಿಂದ ಉಂಟಾಗುತ್ತವೆ.

	ಕರಲುಭೂಮಿ ಪರ್ಯಾಯವಾಗಿ ತೋಯುವುದು ಮತ್ತು ಒಣಗುವುದರಿಂದ ಅದರಲ್ಲಿರುವ ಕ್ಷಾರಗಳು ಮೇಲೆದ್ದು ಹರಳುಗಟ್ಟುತ್ತವೆ. ಹೀಗೆ ಚೌಳು ಮತ್ತು ಉಪ್ಪು ನದೀದಡಗಳು ಮತ್ತು ತಗ್ಗಾದ ಜೌಗು ಪ್ರದೇಶಗಳಲ್ಲಿ ನಿಕ್ಷೇಪವಾಗುತ್ತವೆ. ಅಲ್ಲಿಯ ಸೂಕ್ಷ್ಮ ಮರಳು ಕಣಗಳು ಅವುಗಳ ಸಂಗ್ರಹಣಕ್ಕೆ ಅನುಕೂಲವಾಗಿರುವುವು. ಆ ಪ್ರದೇಶಗಳಲ್ಲಿ ಮಳೆಗಾಲದಲ್ಲಿ 3-4 ತಿಂಗಳು ನೀರು ನಿಲ್ಲುವುದರಿಂದ, ಮಣ್ಣಿನ ರಂಧ್ರಗಳು ಚೌಳು ಮತ್ತು ಉಪ್ಪಿನ ದ್ರಾವಣದಿಂದ ತುಂಬಿರುತ್ತವೆ. ಬೇಸಿಗೆ ಪ್ರಾರಂಭವಾದಾಗ ನೆಲ ಒಣಗುತ್ತದೆ. ಆಗ ಈ ದ್ರಾವಣ ಲೋಮನಾಳಾ ಕರ್ಷಣ ಕಾರ್ಯಗತಿಯಿಂದ ಭೂಮಿಯ ಮೇಲ್ಭಾಗಕ್ಕೆ ಏರಿ ಫನೀಕರಿಸಿ ಚೌಳುಕಣಗಳು ಹೂವಿನಂತೆ ಅರಳುತ್ತವೆ. ಈ ಕಾರ್ಯ ಜನವರಿಯಿಂದ ಫೆಬ್ರವರಿಯತನಕ ಹೆಚ್ಚಾಗಿಯೂ ಅನಂತರ ಏಪ್ರಿಲ್ ಮಧ್ಯದತನಕ ಸುಮಾರಾಗಿಯೂ ನಡೆಯುತ್ತದೆ. ಬೇಸಿಗೆಯ ಬಿಸಿಲು ಹೆಚ್ಚಾದಾಗ ಚೌಳು ಹರಳುಗಳು ಒಡೆದು ಪುಡಿಯಾಗಿ ಮರಳಿನೊಂದಿಗೆ ಬೆರೆಯುತ್ತವೆ. ಈ ಪದರ ಸುಮಾರು ಒಂದು ಸೆಂ.ಮೀ.ನಷ್ಟು ಮಂದವಾಗಿರುತ್ತದೆ. ಅನಂತರ ಈ ಮಣ್ಣನ್ನು ಕೆರೆದು ಸಂಗ್ರಹಿಸಬಹುದು.

	ಮಾಂಟಿಮಾರ್ಲಿನೈಟ್ ಮತ್ತು ಅತ್ತಪುಲ್ಗೈಟುಗಳು ಫುಲ್ಲರ್ ಮಣ್ಣಿನಲ್ಲಿರುವ ಪ್ರಮುಖ ಖನಿಜಗಳು. ಮಾಂಟಿಮಾರ್ಲಿನೈಟ್ ಜೊತೆಗೆ ಬೀಡ್‍ಲೈಟ್ ಅಲ್ಪ ಮೊತ್ತದಲ್ಲಿರುವ ಜೇಡೇ ಬೆಂಟೊನೈಟ್. ಇದರಲ್ಲಿ ಜ್ವಾಲಾಮುಖಿಜ ಶಿಲೆಗಳ ಅಂಶವೂ ಇರುತ್ತದೆ. ಇದು ನೀರನ್ನು ಹೀರಿ ಎಂಟು ಪಟ್ಟು ಹಿಗ್ಗಬಲ್ಲದು. ಕಾಶ್ಮೀರದ ಬುನ್ಬೇರ್ ಮತ್ತು ರತನ್‍ಪುರÀಸರೇರ ಎಂಬಲ್ಲಿಯ ಶಿವಾಲಿಕ್ ಶಿಲಾಶ್ರೇಣಿಗಳಲ್ಲಿ ದೊರೆಯುತ್ತದೆ. ಜೋಧ್‍ಪುರದ ಹಾತಿ-ಕಾ-ದಾನಿ ರಾಜಸ್ಥಾನದ ಕರಾಲಿ, ಬಿಹಾರದ ಸಂತಾಲ್-ಪರಗಣದ ತೀನ್ಪಹಾರ್ ಎಂಬಲ್ಲಿಯೂ ದೊರೆಯುತ್ತದೆ. ಬೆಂಟೊನೈಟನ್ನು ಕಲ್ಲೆಣ್ಣೆ ಗಣಿ ಉದ್ಯಮ ಮತ್ತು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ